Tuesday, July 26, 2011

ರಾಜ್ಯದ ನೂತನ ಲೋಕಾಯುಕ್ತರಾಗಿ ಸುಪ್ರೀಂಕೋರ್ಟ್‌‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌

ಬೆಂಗಳೂರು, ಮಂಗಳವಾರ, 26 ಜುಲೈ 2011( 12:05 IST )
ರಾಜ್ಯದ ನೂತನ ಲೋಕಾಯುಕ್ತರಾಗಿ ಸುಪ್ರೀಂಕೋರ್ಟ್‌‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಹಾಗೂ ಉಪ ಲೋಕಾಯುಕ್ತರಾಗಿ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗುರುರಾಜ್‌ ಅವರನ್ನು ರಾಜ್ಯಪಾಲರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ಅಧಿಕಾರಾವಧಿ ಆಗಸ್ಟ್‌ 2ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಸರಕಾರವು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಹಾಗೂ ಉಪ ಲೋಕಾಯುಕ್ತರನ್ನಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗುರುರಾಜ್‌ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಇದನ್ನು ಅಂಗೀಕರಿಸಿದ ರಾಜ್ಯಪಾಲರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2ಜಿ ಹಗರಣ ಕುರಿತ ತನಿಖೆಗಾಗಿ ಕೇಂದ್ರ ಸರಕಾರ ನೇಮಿಸಿದ ಸಮಿತಿಯ ಸದಸ್ಯರಾಗಿಯೂ ಪಾಟೀಲ್‌ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ನೂತನ ಲೋಕಾಯುಕ್ತರಾಗಿ ಶಿವರಾಜ್‌ ಪಾಟೀಲ್‌ ಹಾಗೂ ಉಪ ಲೋಕಾಯುಕ್ತರಾಗಿ ಗುರುರಾಜ್‌ ಅವರು ಆಗಸ್ಟ್‌ 3ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ನ್ಯಾ.ಶಿವರಾಜ್ ಪಾಟೀಲ್:
ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಮೂಲತಃ ರಾಯಚೂರು ಜಿಲ್ಲೆಯವರು. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ವಕೀಲ ವೃತ್ತಿ ಆರಂಭಿಸಿದ್ದ ಶಿವರಾಜ್ ಪಾಟೀಲ್ ಅಂದಿನ ದಿನಗಳಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳಲ್ಲಿ ಸಮರ್ಥ ವಾದ ಮಂಡಿಸಿ ಹೆಸರು ಗಳಿಸಿದ್ದರು. 1967ರಿಂದ 1975ರವರೆಗೆ ಗುಲ್ಬರ್ಗಾದ ಸೇಠ್ ಶಂಕರ್ ಲಾಲ್ ಲಾಹೋಟಿ ಕಾನೂನು ಕಾಲೇಜಿನಲ್ಲಿ ಪಾರ್ಟ್ ಟೈಮ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.

1990ರಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ನಂತರ ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದ ಶಿವರಾಜ್ ಪಾಟೀಲ್, 1999ರಲ್ಲಿ ರಾಜಸ್ತಾನ್ ಹೈಕೋರ್ಟ್ ಚೀಫ್ ಜಸ್ಟೀಸ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. 2000ನೇ ಇಸವಿಯಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಅವರು 11-1-2005ರಲ್ಲಿ ನಿವೃತ್ತಿಯಾಗಿದ್ದರು

No comments:

Post a Comment